ಸನ್ 1934ರಲ್ಲಿ ಅಂದಿನ ಮೈಸೂರು ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸರ್ ಶ್ರೀ ಡಿ. ರ‍್ಯಾಲಿಯವರು ಅಧಿಕಾರ ವಹಿಸಿಕೊಂಡರು. ಅವರು ಆಂಗ್ಲದವರಾದರೂ ಇಲ್ಲಿನ ನೌಕರ ಬಾಂಧವರ ಸ್ಥಿತಿಗಳನ್ನು ಅರಿತುಕೊಂಡು ಈ ಇಲಾಖೆಗೆ ಒಂದು ಸಹಕಾರ ಸಂಘದ ಅವಶ್ಯಕತೆ ಇದೆ ಎಂದು ಮನವರಿತು ಕಛೇರಿಯ ವಿಲೇಖನಾಧಿಕಾರಿಗಳನ್ನು ಕರೆಯಿಸಿ ಅವರ ಮುಂದೆ ಮೇಲಿನ ವಿಷಯವನ್ನು ಪ್ರಸ್ತಾಪಿಸಿದರು. ಸಂಘದ ಅಸ್ತಿತ್ವದ ಸಲುವಾಗಿ ಅಂದಿನ ವಿಲೇಖನಾಧಿಕಾರಿಗಳಾದ ಶ್ರೀ ಟಿ. ಶ್ಯಾಮ ಅಯ್ಯಂಗಾರ್ ರವರನ್ನು ಕರೆಯಿಸಿ ನೌಕರರಿಗೆ ಅನುಕೂಲವಾಗುವ ಒಂದು ಸಹಕಾರ ಸಂಘದ ಅವಶ್ಯಕತೆಯನ್ನು ಒತ್ತಿ ಹೇಳಿ ಅದರಂತೆ ಸಹಕಾರ ಸಂಘವನ್ನು ಕಾರ್ಯರೂಪಕ್ಕೆ ತರಲು ತಮ್ಮ ಸ್ವಹಸ್ತದಿಂದ ಎರಡು ಸಾವಿರ ರೂಪಾಯಿಗಳ ದೇಣಿಗೆಯನ್ನು ನೀಡಿ ಈ ಸಹಕಾರ ಸಂಘದ ಸ್ಥಾಪನೆಗೆ ನಾಂದಿಯಾದರು. ಅಂದಿನ ದಿನಗಳಲ್ಲಿ ಎರಡು ಸಾವಿರ ರೂಪಾಯಿಗಳು ಸಾಮಾನ್ಯ ಧನವೇನೂ ಆಗಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಸಹಕಾರ ಸಂಘದ ಸ್ಥಾಪನೆ ನಂತರ ಇದರ ಕಾರ್ಯವನ್ನು ಒಂದು ಚೌಕಟ್ಟಿನಲ್ಲಿ ನಿರ್ವಹಿಸಲು ಹಾಗೂ ಸದಸ್ಯರುಗಳ ಮತ್ತು ನಿರ್ದೇಶಕರುಗಳ ಶಿಸ್ತು ಸಂಹಿತೆಗಳನ್ನು ಕಾಪಾಡುವ ಸಲುವಾಗಿ ಸಂಘದ ನೀತಿ ನಿಯಮಾವಳಿಗಳನ್ನು ರೂಪಿಸಲು ಅಂದಿನ ವಿಲೇಖನಾಧಿಕಾರಿಗಳಾದ ಶ್ರೀ ಟಿ.ಶ್ಯಾಮಅಯ್ಯಂಗಾರ್ ಅವರು ಅಂದಿನ ಶೀಘ್ರಲಿಪಿಗಾರರಾದ ಶ್ರೀ ಟಿ. ನಾರಾಯಣ ಅಯ್ಯರ್ ಮತ್ತು ಗ್ರಂಥ ಪಾಲಕರಾದ ಶ್ರೀ ಟಿ.ಕೆ. ಸಂಜೀವರಾವ್ ಇವರುಗಳಿಗೆ ಸಂಘದ ಉಪವಿಧಿಗಳನ್ನು ರಚಿಸಲು ಆದೇಶಿಸಿದರು.

ಅದರಂತೆ ಈ ಸಂಘದ ನೀತಿ ನಿಯಮಾವಳಿಗಳನ್ನು ರಚಿಸಿ ದಿನಾಂಕ 14-10-1938 ರಂದು ಸಹಕಾರ ಸಂಘಗಳ ನಿಬಂಧಕರ ಕಛೇರಿಯಲ್ಲಿ ನ್ಯಾಯಾಂಗ ಇಲಾಖೆ ಸಹಕಾರ ಸಂಘ ಎಂದು ನೋಂದಾಯಿಸಲ್ಪಟ್ಟಿತು. ಈ ಹಿಂದೆ ಸಂಘವು ಕೇವಲ ಸಾಲದ ವ್ಯವಹಾರವನ್ನು ಮಾತ್ರ ನಿರ್ವಹಿಸುತ್ತಿತ್ತು. ಇದರಿಂದ ಸಂಘದ ಸದಸ್ಯರಿಗೆ ಅಂತಹ ಹೆಚ್ಚಿನ ಲಾಭವು ದೊರಕದೇ ಇದ್ದದ್ದರಿಂದ ಇದರ ಕಾರ್ಯವ್ಯಾಪ್ತಿಯನ್ನು ಹಾಗೂ ಚಟುವಟಿಕೆಗಳನ್ನು ವಿಸ್ತರಿಸಬೇಕೆಂದು ತೀರ್ಮಾನಿಸಿ ದಿನಾಂಕ 31-03-1983ರಂದು ಈ ಸಂಘಕ್ಕೆ ನ್ಯಾಯಾಂಗ ಇಲಾಖೆ ವಿವಿಧೋದ್ದೇಶ ಸಹಕಾರ ಸಂಘವೆಂದು ಪುನರ್ ನಾಮಕರಣ ಮಾಡಿ ಸಂಘದ ಉಪವಿಧಿಗಳಿಗೆ ಸಮಗ್ರ ತಿದ್ದುಪಡಿ ತಂದು ಸಂಘವನ್ನು ಪುನರುತ್ಥಾನ ಮಾಡಲಾಯಿತು. ಕೇವಲ ನ್ಯಾಯಾಂಗ ಇಲಾಖೆ ನೌಕರರಿಗೆ ಸಿಮೀತವಾಗಿದ್ದ ಸದಸ್ಯತ್ವವು ಅಡ್ವೋಕೇಟ್ ಜನರಲ್‌ರವರ ಕಛೇರಿ ಹಾಗೂ ಕಾನೂನು ಸಲಹಾ ಮಂಡಳಿಗೆ ಸಾಲವನ್ನು ಒದಗಿಸಲು ಸಾದ್ಯವಾಗುವಂತೆ ವಿಸ್ತರಿಸಲಾಯಿತು.

ಹೀಗೆ ಸ್ಥಾಪಿತಗೊಂಡ ನಮ್ಮ ಸಹಕಾರ ಸಂಘದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದಸ್ಯರು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಸಂಘವು ಉನ್ನತ ರೀತಿಯಲ್ಲಿ ನಡೆದುಕೊಂಡು ಹೋಗಲು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಪೋಷಿಸುತ್ತಿದ್ದಾರೆ. ಇದರ ಪ್ರತಿಫಲವೇ ಇಂದು ನಮ್ಮ ಸಂಘವು ಸತತವಾಗಿ ‘ಎ’ ದರ್ಜೆಯ ಸಂಘವಾಗಿ ಮುಂದುವರೆದಿದೆ.